ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||
ಜೀವನದ ನೋವು-ನಲಿವು, ಸೋಲು-ಗೆಲುವುಗಳನ್ನು ಸಾಕಷ್ಟು ಕಂಡ ಮನಸ್ಸು ಇದ್ಯಾವುದೂ ಶಾಶ್ವತವಲ್ಲ, “ಬೇರೆ ಏನೋ ಇದೆ” ಎಂದು ಏನನ್ನೋ ಹುಡುಕುತ್ತಿತ್ತು. ಬ್ಯಾಂಕ್ ಕೆಲಸದ ಜೊತೆಗೆ ರೇಖಿ ಅಭ್ಯಾಸ ಹಾಗೂ ಅಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಾ ಸಮಧಾನ ಪಡೆಯುವ ಪ್ರಯತ್ನದಲ್ಲಿ ಇದ್ದೆ. 1998ರ ಜೂನ್ ತಿಂಗಳ ಆರು ದಿನಗಳು ಜೀವನದಲ್ಲಿ ಮರೆಯಲಾಗದ ದಿನಗಳು. “ಜೀವನಕಲಾ ಶಿಬಿರ” ಅದೂ ಛಾಯಾಪತಿ ಗುರುಜೀ (ಸೂರ್ಯಪಾದ ಸ್ವಾಮೀಜಿ)ಯವರು ನಡೆಸಿಕೊಟ್ಟ ಆ ಶಿಬಿರದಲ್ಲಿ ಭಾಗವಹಿಸಿದಾಗ ನಾನು ಹುಡುಕುತ್ತಿದ್ದ ‘ಏನೋ’ ಸಿಕ್ಕಿದಂತಹ ಅನುಭವ. ಶಿಬಿರದಲ್ಲಿ ಅವರು ವಿವರಿಸುತ್ತಿದ್ದ ಜ್ಞಾನದ ಮಾತುಗಳು, ಸುದರ್ಶನ ಕ್ರಿಯೆ, ಅವರ ಸಾಟಿ ಇಲ್ಲದ ಸತ್ಸಂಗ ಲಹರಿಯಿಂದ ಜೀವನದ ಉದ್ದೇಶದ ಚಿತ್ರಣ ಮೂಡಲಾರಂಭಿಸಿತು.
ಪೂರ್ವ ಜನ್ಮದ ಸುಕೃತದ ಫಲವೋ ಎಂಬಂತೆ ಶೀಘ್ರದಲ್ಲೇ ಶ್ರೀ ಶ್ರೀ ರವಿಶಂಕರ ಗುರುಜೀಯವರ ದರ್ಶನ ಭಾಗ್ಯ ಲಭಿಸಿತು. ದಿವ್ಯಜ್ಯೋತಿಯಂತೆ ತೇಜೋಮಯವಾದ ಅವರ ಪ್ರೇಮಭರಿತ ಕಣ್ಣುಗಳ ಕಾಂತಿಯಿಂದ ನನ್ನ ಜೀವನವೇ ಬೆಳಗಿತು. ವರ್ಣಾತೀತವಾದ ಆನಂದದ ಜೊತೆ ‘ಸೇವೆ ಮಾಡಬೇಕು’ ‘ದೇವರನ್ನು ಕಾಣಬೇಕು’ ಎಂಬ ಆಸೆ ಪ್ರಬಲವಾಯಿತು. ಆಗಲೇ ಉನ್ನತ ಧ್ಯಾನ ಶಿಬಿರದಲ್ಲಿ ಭಾಗವಹಿಸುವ ಅವಕಾಶವೂ ದೊರೆಯಿತು.
ಆಸೆಗಳು ಸಣ್ಣದಿರಲಿ, ದೊಡ್ಡದಿರಲಿ, ‘ಸಾಕಪ್ಪ ಇನ್ನು’ ಅನಿಸುವಷ್ಟು ಎಲ್ಲವನ್ನೂ ನೀಡುವ ಕಲ್ಪವೃಕ್ಷ ಜೀವನದಲ್ಲಿ ಸಿಕ್ಕ ಅನುಭವ. ಅನುಭವಗಳಿಗಿಂತ ಅನುಭೂತಿಯೇ ಹೆಚ್ಚು ಆಯಿತು. ಕನ್ನಡ ಜಾಲತಾಣಕ್ಕಾಗಿ ಒಂದೆರಡು ಅನುಭವ ಹಂಚಿಕೊಳ್ಳಿ ಎಂದು ಕೇಳಿಕೊಂಡಾಗ ಬಹಳ ಕಷ್ಟ ಕೆಲಸ ಎನಿಸಿತು. ನೂರಾರು ಅನುಭವಗಳಲ್ಲಿ ಯಾವುದನ್ನು ಹಂಚಿಕೊಳ್ಳುವುದು? ಅಷ್ಟಕ್ಕೂ ಅನುಭವ ಶಬ್ದಗಳಿಗೆ ಅತೀತವಾದದ್ದು. ಆದರೂ ಒಂದೆರಡು ಹಳೇಯ ಅನುಭವ ಇಲ್ಲಿದೆ:
ಗುರು ತತ್ವದ ಬಗ್ಗೆ ಪ್ರಾಥಮಿಕ ಶಿಬಿರದಲ್ಲಿ ಮನಮುಟ್ಟುವಂತೆ ವಿವರಿಸಿದ್ದರೂ ಸಾಕಾರ ರೂಪದ ಒಲವು ಕಡಿಮೆ ಆಗಿರಲಿಲ್ಲ. ಸತ್ಸಂಗದ ನಶೆ ಏರಿ ದೇವರನ್ನು ಕಾಣಲೇಬೇಕು ಎಂಬ ಆಸೆ ತೀವ್ರವಾಗಿತ್ತು. ‘ಯದ್ಬಾವಂ ತದ್ಭವತಿ’ ಎಂಬಂತೆ ಗುರುದೇವರು ದೇವರ ಪ್ರತಿರೂಪ/ಅವತಾರ ಎಂಬ ಭಾವ ಇರುವಾಗ ‘ಗುರುಗಳು ತನ್ನಲ್ಲೇ’ ದೇವರನ್ನು ಕಾಣಲು ಸಾಧ್ಯ ಎಂಬಂತಹ ಬಹಳಷ್ಟು ಅನುಭವ ಕೊಟ್ಟಿದ್ದಾರೆ.
1999 ನವರಾತ್ರಿಗೆ ಆಶ್ರಮಕ್ಕೆ ಬಂದ ನನಗೆ ಕೆಲವು ದಿನಗಳು ಆಶ್ರಮದಲ್ಲಿ ಉಳಿಯುವ ಅವಕಾಶ ಸಿಕ್ಕಿತ್ತು. ಸಾಧನೆ, ಸತ್ಸಂಗ , ಸತ್ಸಂಗದಲ್ಲಿ ‘ಗುರುಗಳ ಭಾವ’ ಇವುಗಳ ಪ್ರಭಾವದಿಂದ ನನ್ನ ಮನಸ್ಸಿನಲ್ಲಿ ನಿರಂತರ ‘ನಾರಾಯಣ ಸ್ಮರಣೆ’ ನಡೆಯುತ್ತಿತ್ತು. ಒಂದು ದಿನ ಸತ್ಸಂಗದ ನಂತರ ಗುರುದೇವರು ನಾಳೆ ಬೆಳಗ್ಗೆ 5.30ಗೆ ಮುಂಜಾನೆಯ ವಿಹಾರಕ್ಕೆ ಹೋಗೋಣ ಎಂದರು. ( ಸತ್ಸಂಗದಲ್ಲಿ ಇದ್ದದ್ದೇ ಬಹಳ ಕಡಿಮೆ ಜನ) ನಾನು ಬೆಳಗ್ಗೆ ಬೇಗ ಎದ್ದು, ಸ್ನಾನ, ಸಾಧನೆ ಮುಗಿಸಿ ಸಂಭ್ರಮದಿಂದ ಬಂದರೆ ‘ ಶಕ್ತಿ ಕುಟೀರಕ್ಕೆ ಬೀಗ ಹಾಕಿತ್ತು.
ಗುರುದೇವರು ನಡುಗೆ ಆರಂಭಿಸಿ ಆಗಿತ್ತು. ಯಾವ ಕಡೆ ಹೋಗಿದ್ದಾರೆ ಎಂದು ತಿಳಿಯದೆ ಒಂದು ದಾರಿಯಲ್ಲಿ ನಡೆದೆ. ಮನಸ್ಸಿನಲ್ಲಿ ‘ನಾರಾಯಣ ಸ್ವಲ್ಪ ನಿಲ್ಲಪ್ಪಾ... ನನಗೆ ಓಡಲು ಆಗುವುದಿಲ್ಲ ನಿನ್ನ ಜೊತೆ ಬರಬೇಕೆಂದು ಆಸೆ, ದಯವಿಟ್ಟು ಸ್ವಲ್ಪ ನಿಲ್ಲು ಎನ್ನುತ್ತಾ ಹೋಗುತ್ತಿರಲು ಆಶ್ಚರ್ಯ/ಆನಂದ. ಗುರುದೇವರು ನಡುಗೆ ನಿಲ್ಲಿಸಿ, ನನಗಾಗಿ ಕಾಯುತ್ತಿರುವುದನ್ನು ಕಂಡೆ. ನಾನು ಸಮೀಪ ಬಂದಾಗ ‘ನಾರಾಯಣ ನಾನೇ’ ಎಂಬ ಭಾವದಲ್ಲಿ ಮುಗುಳ್ನಕ್ಕು, ‘ಬಾ’ ಎಂದು ಸನ್ನೆ ಮಾಡಿ ಜೊತೆಗೆ ನಡೆದರು. ಸಾಕ್ಷಾತ್ ನಾರಾಯಣನ ಜೊತೆ ‘ವಿಹಾರ’.
ಒಂದು ಬಾರಿ ಉನ್ನತಧ್ಯಾನ ಶಿಬಿರದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡದ ಪುನಲೂರುಗೆ ಹೋಗಿದ್ದೆ. ಅಲ್ಲಿ ಗುರುಗಳ ಭಾವಚಿತ್ರ ಬೀಳಬಾರದೆಂದು ಕುರ್ಚಿ ಮತ್ತು ಭಾವಚಿತ್ರವನ್ನು ಹಗ್ಗದಲ್ಲಿ ಬಿಗಿಯಾಗಿ ಕಟ್ಟಿದ್ದರು. ನನಗೆ ಗುರುಗಳನ್ನು ‘ಕಟ್ಟಿಹಾಕಿದ್ದು’ ಸರಿ ಬೀಳಲಿಲ್ಲ. ಅವರಿಗೆ ಕಿರಿಕಿರಿ ಆಗುತ್ತಿರಬಹುದು ಅನಿಸಿತ್ತು. ರಾತ್ರಿ ಎಲ್ಲರೂ ಊಟಕ್ಕೆ ಹೋದಾಗ, ನಾನು ಹೋಗಿ ಹಗ್ಗ ಬಿಚ್ಚಿದೆ. ಏನೋ ತೃಪ್ತಿ ಆಗಿ ಅಲ್ಲೇ ಒಂದು ಕಡೆ ಕಣ್ಣು ಮುಚ್ಚಿ ಕುಳಿತೆ. ನಿದ್ರೆಯೂ, ಧ್ಯಾನವೂ ಅಲ್ಲದ ಸ್ಥಿತಿ. ಒಂದು ಕ್ಷಣ ಆಶ್ಚರ್ಯಚಕಿತಳಾಗಿ ಕಣ್ಣು ಬಿಟ್ಟೆ. ಗುರುದೇವರು ಭಾವಚಿತ್ರದಿಂದ ಹೊರಗೆ ಬಂದು ನಡೆದು ನಗುತ್ತಾ ಮೆಟ್ಟಿಲು ಇಳಿದು ಹೋಗುತ್ತಿರುವುದನ್ನು ಸ್ಪಷ್ಟವಾಗಿ ನೋಡಿದೆ. ಚರಾ ಚರ ವಸ್ತುಗಳಲ್ಲೂ ಭಗವಂತ.
ಆ ದಿನಗಳಲ್ಲಿ ಆಶ್ರಮದಲ್ಲಿ ಉಪಹಾರಕ್ಕೆ ಬಾಳೆಹಣ್ಣು, ಹಾಲು ನೀಡುತ್ತಿದ್ದರು. ಒಂದು ದಿನ ನಾನು ಅದನ್ನು ತೆಗೆದುಕೊಂಡು ಒಂದು ಮರದ ಕೆಳಗೆ ಕುಳಿತು ಪ್ರಾರ್ಥನೆ ಮಾಡಿ ಕಣ್ಣು ತೆರೆಯುವಾಗ ನನ್ನ ಪಕ್ಕದಲ್ಲಿ ಒಂದು ಬೆಕ್ಕು ಕುಳಿತಿರುವುದನ್ನು ಕಂಡೆ, ಬಾಳೆಹಣ್ಣನ್ನು ಸಣ್ಣ ಸಣ್ಣ ಚೂರು ಮಾಡಿ ಸ್ವಲ್ಪ ಹಾಲು ಹಾಕಿ ಬೆಕ್ಕಿನ ಎದುರು ಇಟ್ಟು, ತಿನ್ನಪ್ಪ ನಾರಾಯಣಾ ಎಂದೆ. ಅದು ತಿಂದು ಹಾಲು ಕುಡಿದು ಹೊರಟು ಹೋಯಿತು. ಬೆಕ್ಕು ಹಾಲು ಕುಡಿದು ಹೋಗುವುದು ಸ್ವಾಭಾವಿಕ, ಅದರಲ್ಲಿ ಏನು ಆಶ್ಚರ್ಯ. ಆದರೆ ಆಗಲೇ ಅಲ್ಲಿ ಬಂದ ಗುರುದೇವರು ತಮ್ಮ ಪಕ್ಕದಲ್ಲಿರುವ ಸಾಹಾಯಕರ ಬಳಿ , ‘ಇವತ್ತು ಉಪಹಾರಕ್ಕೆ ನನಗೇನೂ ಬೇಡ, ಬಾಳೆಹಣ್ಣು, ಹಾಲು ತಿಂದು ಹೊಟ್ಟೆ ತುಂಬಿತು’ ಎಂದು ನನ್ನನ್ನು ನೋಡಿ ನಗುತ್ತಾ ಹೇಳಿದರು. ಭಕ್ತನ ಭಾವಕ್ಕೆ ತಕ್ಕಂತೆ ಭಗವಂತ.
ನನ್ನ ಬಳಿ ಇದ್ದ ಒಂದು ಮುದ್ದಾದ ಕೃಷ್ಣನ ವಿಗ್ರಹ ಕಪ್ಪಗಾಗಿತ್ತು. ‘ಕೃಷ್ಣಾ ಮೊದಲೇ ನೀನು ಕಪ್ಪು’ ಇನಷ್ಟು ಕಪ್ಪು ಆಗಿದ್ದಿ ಏನಾದರೂ ಮಾಡುತ್ತೇನೆ ಎಂದು ಬಂಗಾರದ ಬಣ್ಣ ತಂದು ಒಪ್ಪವಾಗಿ ಕೃಷ್ಣನ ವಿಗ್ರಹಕ್ಕೆ ಹಚ್ಚಿದೆ. ಕೃಷ್ಣ ಪಳ ಪಳ ಹೊಳೆಯುತ್ತಿದ್ದದ್ದನ್ನು ಕಂಡು ಆನಂದ ಪಟ್ಟೆ. ಆ ದಿನ ಆಶ್ರಮಕ್ಕೆ ಹೋಗಿ ವಿಶಾಲಾಕ್ಷಿ ಮಂಟಪದಲ್ಲಿ ಕುಳಿತಿದ್ದಾಗ 4-5 ಭಕ್ತಾದಿಗಳು ನನ್ನ ಪಕ್ಕದಲ್ಲಿ ಕುಳಿತಿದ್ದರು. ಆವರು ಹಿಂದಿಯಲ್ಲಿ ಮಾತನಾಡುತ್ತಿದ್ದದ್ದು ನನಗೆ ಕೇಳಿಸುತ್ತಾ ಇತ್ತು. ‘ ಇವತ್ತು ಒಂದು ಪವಾಡ ಆಯಿತು’ಗುರುದೇವರು ಕುಟೀರದಲ್ಲಿ ಕುಳಿತಿದ್ದಾಗ ಅವರ ಮುಖ ಹಾಗು ಕೈಗಳಲ್ಲಿ ಚಿನ್ನದಂತಹ ಸಣ್ಣ ಪುಡಿ ಕಾಣಿಸಿಕೊಂಡಿತ್ತು. ಎಷ್ಟೇ ಒರೆಸಿದರೂ ಪುನಃ ಪುನಃ ಕಾಣಿಸಿಕೊಳ್ಳುತ್ತಿತ್ತು. ಹೀಗೆ ಕೆಲವು ನಿಮಿಷಗಳ ಕಾಲ ನಡೆಯಿತು ಎಂದು ಹೇಳುತ್ತಿದ್ದರು. ಹೀಗೂ ಉಂಟೆ ?
ಗುರುದೇವರಿಂದ ಪವಾಡ ಸದೃಶವಾದ ಘಟನೆಗಳು ನಡೆಯುವುದು ಎಲ್ಲರ ಜೀವನದಲ್ಲಿ ಸರ್ವೇ ಸಾಮಾನ್ಯ. ಅಂತಹ ಒಂದು ಘಟನೆಯನ್ನು ಹಂಚಿ ಕೊಳ್ಳುತ್ತಿದ್ದೇನೆ.
ಜೀವನ ಕಲಾ ಶಿಬಿರ (ಆನಂದದ ಅನುಭೂತಿಯ ಶಿಬಿರ) ಸಾಗರದಲ್ಲಿ ನಡೆಸಲು ಪೂರ್ವಭಾವಿಸಿದ್ದತೆಗಾಗಿ ಎರಡು ದಿನಗಳ ಮೊದಲೇ ನಾನು ಆಲ್ಲಿ ಹೋಗಿದ್ದೆ. ಗುರುದೇವರು ಆಶ್ರಮದಲ್ಲಿ ಇರುವ ವಿಚಾರ ತಿಳಿದು ಭಾನುವಾರದ ಸತ್ಸಂಗ, ಸೋಮವಾರದ ರುದ್ರಾಭಿಷೇಕದಲ್ಲಿ ಭಾಗವಹಿಸುವ ಇಚ್ಚೆಯಿಂದ ಬೆಂಗಳೂರಿಗೆ ಹೊರಟೆನು. ನಾನು ನನ್ನ ಸೂಟ್ ಕೇಸ್, ಶಿಬಿರಕ್ಕೆ ಬೇಕಾಗುವ ಎಲ್ಲಾ ಸಲಕರಣಿಗಳನ್ನು ಒಳಗೊಂಡ ಬ್ಯಾಗ್ ಎಲ್ಲಾ ಬೀಗ ಹಾಕಿ, ನಾನು ಯಾವಾಗಲೂ ಸಾಗರದಲ್ಲಿ ಇರುತಿದ್ದ, ನಮ್ಮ ಹಳೆಯ ಶಿಬಿರಾರ್ಥಿ ಹಾಗೂ ಸಂಗೀತ ಶಿಕ್ಷಕಿಯವರ ಮನೆಗೆ ಸೇರಿದ ಸಂಗೀತ ತರಗತಿಯಲ್ಲಿ ಇರಿಸಿದೆ. ಅದು ವೀಣಿ, ತಂಬೂರ ಮೊದಲಾದ ಪಕ್ಕವಾದ್ಯಗಳು ಹಾಗೂ ಸಂಗೀತಕ್ಕೆ ಸಂಬಂಧಿಸಿದ ಇತರ ಬೆಲೆ ಬಾಳುವ ವಸ್ತುಗಳು ಮಾತ್ರ ಇರುವ ಸುರಕ್ಷಿತವಾದ ಜಾಗವಾಗಿತ್ತು. ಯಾರ ಪ್ರವೇಶವೂ ಇರಲಿಲ್ಲ. ಸೋಮವಾರ ರುದ್ರಾಭಿಷೇಕ ಮುಗಿದ ನಂತರ ಇನ್ನೇನು ಬೆಂಗಳೂರಿನಿಂದ ಸಾಗರಕ್ಕೆ ಹೊರಡಬೇಕು, ಅಷ್ಟರಲ್ಲಿ ಆ ಮನೆಯವರಿಂದ ದೂರವಾಣಿ ಕರೆ ಬಂದಿತ್ತು- ಭಾರವಾದ ಧ್ವನಿಯಲ್ಲಿ ಹೇಳುತ್ತಿದ್ದರು – ‘ಕ್ಷಮಿಸಿ, ಆಕಸ್ಮಿಕವಾದ ಬೆಂಕಿಯ ಭೀಕರ ಅವಘಡಕ್ಕೆ ಸಂಗೀತ ಶಾಲೆಯು ಒಳಗಾಗಿದೆ. ಎಲ್ಲಾ ವಸ್ತುಗಳೂ ಬಸ್ಮವಾಗಿವೆ. ನೀವು ಇರಿಸಿದ ಸೂಟ್ ಕೇಸ್, ಬ್ಯಾಗ್ ನ ಅವಶೇಷವೂ ಇಲ್ಲ’ ಎಂದರು. ನಾನು ಅವರನ್ನು ಸಮಾಧಾನ ಪಡಿಸಿದೆ. ಒಂದು ಕ್ಷಣ ಏನು ಮಾಡುವುದು ಎಂದು ತಿಳಿಯದೆ, ಶಿಬಿರದ ಪಂಚ ಮಹಾಸೂತ್ರಗಳನ್ನು ಜ್ಞಾಪಿಸಿಕೊಂಡು ಶಿಬಿರಕ್ಕೆ ಬೇರೆ ಶಿಕ್ಷಕರ ಏರ್ಪಾಡಿನಲ್ಲಿ ತೊಡಗಿದೆ. ಯಾಕೆಂದರೆ ನಮ್ಮ ಎಲ್ಲಕ್ಕಿಂತ ಬೆಲೆಬಾಳುವ ಸುದರ್ಶನಕ್ರಿಯೆ ಟೇಪ್, ಟೇಪ್ ರೆಕಾರ್ಡರ್, ಸ್ಪೀಕರ್ ಮುಂತಾದುವುಗಳು ಆ ಬ್ಯಾಗ್ನಲ್ಲಿ ಇದ್ದವು. ಸ್ವಲ್ಪ ಧ್ಯಾನ ಮಾಡಿ ಮನಸ್ಸನ್ನು ಒಂದು ಹದಕ್ಕೆ ತಂದ ನಂತರ ಸಾಗರಕ್ಕೆ ಹೊರಟೆ. ಒಳ ಮನಸ್ಸು ಹೇಳುತ್ತಿತ್ತು ‘ಸುದರ್ಶನಕ್ರಿಯೆ ಟೇಪ್’’ ಗೆ ಏನೂ ಆಗಿರಲಿಕ್ಕಿಲ್ಲ ಎಂದು. ಪುನಃ ವಿಚಾರಿಸಿದಾಗ ಬಂದ ಮಾಹಿತಿಯಂತೆ ಅಲ್ಲಿ ಯಾವ ವಸ್ತುಗಳ ಅವಶೇಷವೂ ಇರಲಿಲ್ಲ. ಪ್ರಯಾಣ ಮಾಡುತ್ತಾ ಇರುವಾಗಲೇ ಸಾಗರದವರೇ ಆದ ಒಬ್ಬರನ್ನು ಆ ಜಾಗಕ್ಕೆ ಕಳುಹಿಸಿ ಸ್ವಲ್ಪ ಹುಡುಕಾಡಲು ಹೇಳಿದೆ. ಅವರು ಅಲ್ಲಿ ಹೋಗಿ ನೋಡಿದಾಗ ಎಲ್ಲರಿಗೂ ಆಶ್ಚರ್ಯವಾಗುವಂತಹ ವಿಚಾರ ಕಾದಿತ್ತು. ವೀಣಾ, ತಂಬುರ, ಮರ ಹಾಗೂ ಲೋಹದ ಕಬಾಟುಗಳು, ಧ್ವನಿ ಸುರುಳಿಗಳು, ಸಂಗೀತ ಶಾಲೆಗೆ ಸಂಬಂಧಪಟ್ಟ ಎಲ್ಲಾ ಬೆಲೆಬಾಳುವ ವಸ್ತುಗಳು, ನನ್ನ ಸೂಟ್ ಕೇಸ್, ಟೇಪ್ ರೆಕಾರ್ಡರ್, ಸ್ಪೀಕರ್, ಎಲ್ಲಾ ವಸ್ತುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡ ಅಗ್ನಿದೇವನು ನಮ್ಮ ಗುರುದೇವರು ಮುಟ್ಟಿ ಆಶೀರ್ವದಿಸಿ ಕೊಟ್ಟ ಸುದರ್ಶನಕ್ರಿಯೆ ಟೇಪ್ ಇರಿಸಿದ ಮರದ ಸಣ್ಣ ಪೆಟ್ಟಿಗೆ ಹಾಗೂ ಗುರುದೇವರ ಭಾವಚಿತ್ರವನ್ನು ಸ್ವಲ್ಪವೂ ಹಾನಿ ಆಗದಂತೆ ಸುರಕ್ಷಿತವಾಗಿ ಕಾಪಾಡಿದ್ದ. ಸಂಗೀತ ಶಿಕ್ಷಕಿಯವರ ಮನೆಯವರನ್ನು ಸಮಾಧಾನ ಪಡಿಸಿ ಶಿಬಿರವನ್ನು ಮುಂದುವರಿಸಿದೆ. ವಿಚಿತ್ರವಾದರೂ ನಿಜ.
ಗುರುದೇವರ ಸಮಕ್ಷಮದಲ್ಲಿ ಪ್ರತಿಬಾರಿಯೂ “ನೀವು ಅತ್ಯಂತ ವಿಶೇಷವಾದವರು” ಎಂದು ಏರಿಸುತ್ತಾರೆ. ಆ ವಿಶೇಷತೆ ತಲೆಗೆ ಏರಿದಾಗ ‘ನೀನು ಏನೂ ಅಲ್ಲ’ ಎಂದು ಇಳಿಸುತ್ತಾರೆ. ಸಂಗೀತದಲ್ಲಿ ಪಕ್ಕವಾದ್ಯಗಳ ಶೃತಿ ಏರಿಸಿ ಇಳಿಸಿದಂತೆ, ನಮ್ಮ ಅಂತರಂಗದ ಭಾವನೆಗಳನ್ನು ಹದವಾಗಿ ಏರಿಳಿಸಿ ‘ ನಾನು ಮಾತ್ರ ಯಾವ ಶೃತಿಗೂ ಸಿಲುಕದ ಮಹಾ ಮಹಿಮ’ ಎಂಬ ಭಾವದಲ್ಲಿ ನಗುತ್ತಿರುತ್ತಾರೆ, ನಮ್ಮೆಲ್ಲರ ಪ್ರೀತಿಯ ಗುರುದೇವರು.
ಸೀಮೆ ಇಲ್ಲದ ಅವ್ಯಾಜ್ಯ ಪ್ರೀತಿ, ಆಳವಾದ ಜ್ಞಾನ, ನವನವೀನ ಧ್ಯಾನ, ನಶೆ ಏರಿಸುವ ಸತ್ಸಂಗ ಗಾಯನ, ತೃಪ್ತಿ ಆಗುವಷ್ಟು ಸೇವಾ ಅವಕಾಶ, ಹಾಸ್ಯ ವಿನೋದ, ‘ಓಹೋ ಇವರು ಎ.ಓ.ಎಲ್ ಶಿಕ್ಷಕಿ’ ಗುರುಜೀಯವರ ಪ್ರತಿನಿಧಿ’ ಎಂದು ಅಭಿಮಾನದಿಂದ ಉಪಚರಿಸುವ ಶಿಬಿರಾರ್ಥಿಗಳು, ಗುರುದೇವರ ಎದುರಿನಲ್ಲಿ ಪೆದ್ದು ಪೆದ್ದಾಗಿ ವರ್ತಿಸುವ ಸಂದರ್ಭಗಳು, ಸ್ವರ್ಗ, ವೈಕುಂಠ, ಕೈಲಾಸದಲ್ಲಿ ನಾವು ಇದ್ದೇವೆ ಎಂಬ ದಿವ್ಯ ಅನುಭವಗಳು ಇವುಗಳನ್ನೆಲ್ಲಾ ನೀಡುವ ಗುರುದೇವರು ನಮ್ಮ ಜೊತೆ, ನಮ್ಮಲ್ಲೇ ಇರುವಾಗ ಜೀವನದಲ್ಲಿ ಇನ್ನೇನು ಕೊರತೆ?